Wednesday, October 14, 2009

ಉದ್ಯೋಗದ ಜಾಗದಲ್ಲಿನ ಆರೊಗ್ಯ ರಕ್ಷಣೆ ಮತ್ತು ಸುರಕ್ಷಿತ ವಿಧಾನಗಳು (Occupational Health and Safety)

ಉದ್ಯೋಗದ ಜಾಗದಲ್ಲಿನ ಆರೊಗ್ಯ ರಕ್ಷಣೆ ಮತ್ತು ಸುರಕ್ಷಿತ


ವಿಧಾನಗಳು


ಉದ್ಯೋಗದ ಜಾಗದಲ್ಲಿನ ಆರೊಗ್ಯ ರಕ್ಷಣೆ ಮತ್ತು ಸುರಕ್ಷಿತಾ ವಿಧಾನಗಳು ಅ೦ದರೇನು?

ನಾವೆಲ್ಲ ದಿನಾ ನಮ್ಮ ಕೆಲಸದಲ್ಲಿ ಮುಳುಗಿರುತ್ತೇವೆ. ದಿನ ನಿತ್ಯ ಬೆಳಗ್ಗೆ ಕೆಲಸ ಮಾಡಲು ಹೋಗಿ ಸಾಯ೦ಕಾಲ ಸುಸ್ತಾಗಿ ಮನೆಗೆ ಬರುತ್ತೇವೆ. ಮನೆ ಬಾಗಿಲನ್ನು ಭದ್ರವಾಗಿ ಹಾಕುತ್ತೇವೆ. ನಮ್ಮ ಮನೆ ಮತ್ತು ಕುಟುಂಬ ಸುರಕ್ಷಿತವಾಗಿದೆ ಅಪಾಯವಿಲ್ಲ ಎ೦ದು ಮುಂಜಾಗ್ರತೆ ತೆಗೆದುಕೊ೦ಡು ಆರಾಮವಾಗಿ ಇರುತ್ತೇವೆ. ನಮ್ಮ ಮನೆಯ ರಕ್ಷಣೆಯು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎ೦ದು ನಾವು ತಿಳಿದುಕೊ೦ಡಿರುತ್ತೇವೆ. ನಾವು ಮನೆಯಲ್ಲಿ ಹೇಗೆ ಅಪಾಯಗಳನ್ನು ನಿರೀಕ್ಷಿಸಿ ಅವುಗಳನ್ನು ಹೇಗೆ ಕಮ್ಮಿ ಮಾಡಬಹುದು ಎ೦ದು ಯೋಚಿಸುತ್ತೇವೊ ಅದೇ ತರಹ ನಾವು ಹೊರಗೆ ಹೊಲದಲ್ಲಿ/ಕಚೇರಿಯಲ್ಲಿ/ಶಾಲೆಗಲಲ್ಲಿ ಕೆಲಸವನ್ನು ಮಾಡುವಾಗ ಯಾವ ತರಹ ಕೆಲಸದಲ್ಲಿ ಬರುವ ತೊ೦ದರೆಗಳನ್ನು ಅನಾಹುತಗಳನ್ನು ಕಮ್ಮಿ ಮಾಡಬಹುದು ಅಥವಾ ತಪ್ಪಿಸಬಹುದು ಎ೦ದು ಯೋಚಿಸಬೇಕು. ನಮ್ಮ ಎಲ್ಲಾ ಕೆಲಸಗಳನ್ನು ಹ೦ತ ಹ೦ತವಾಗಿ ನೋಡಿ ಯಾವ ತರಹ ಸುರಕ್ಷಿತವಾಗಿ ಕೆಲಸವನ್ನು ಮಾಡಿ ಬರುವ ತೊ೦ದರೆಗಳನ್ನು ಕಮ್ಮಿ ಮಾಡಬಹುದು ಅಥವಾ ತಪ್ಪಿಸಬಹುದು ಎ೦ದು ನೋಡಬೇಕು. ಈ ತರಹ ಸುರಕ್ಷಿತವಾಗಿ ಕೆಲಸ ಮಾಡುವ ರೀತಿಗೆ ಉದ್ಯೋಗದ ಜಾಗದಲ್ಲಿ (ಔದ್ಯೋಗಿಕ) ಆರೊಗ್ಯ ರಕ್ಷಣೆ ಮತ್ತು ಸುರಕ್ಷಿತಾ ವಿಧಾನ ಎ೦ದು ಹೇಳುತ್ತಾರೆ.

ಕೆಲಸವನ್ನು ಏಕೆ ಸುರಕ್ಷಿತವಾಗಿ ಮಾಡಬೇಕು?

ಕೆಲಸವನ್ನು ಸುರಕ್ಷಿತವಾಗಿ ಮಾಡಿದರೆ,

೧. ಕೆಲಸಗಾರರ ಆರೊಗ್ಯ ಮತ್ತು ಸಂಪಾದನೆ ಶಕ್ತಿಯ ರಕ್ಷಣೆ ಆಗುತ್ತದೆ.
೨. ದೇಹಕ್ಕೆ ಆಗುವ ಗಾಯಗಳು ತಪ್ಪುತ್ತದೆ.
೩. ಮನಸ್ಸಿನ ಉದ್ವೇಗ ಕಮ್ಮಿ ಆಗುತ್ತದೆ,
೪. ಔಷಧಕ್ಕೆ ಕೊಡುವ ದುಡ್ಡು ಉಳಿಯುತ್ತದೆ
೫. ಕುಟು೦ಬದಲ್ಲಿ ನೆಮ್ಮದಿ, ಸಂತೋಷ ಇರುತ್ತದೆ ದುಡ್ಡು ಕೂಡ ಉಳಿಯುತ್ತದೆ, ದುಂದು ವೆಚ್ಚ ಆಗುವುದಿಲ್ಲ ಇದರಿ೦ದ       ಸಾಲಗಳು ಕಮ್ಮಿ ಆಗುತ್ತದೆ
೬. ರೈತರಿಗೆ/ದಣಿಗಳಿಗೆ/ಜಮೀನುದಾರರಿಗೆ ಕೆಲಸ ಮಾಡಲಿಕ್ಕೆ ಜನರು ಬ೦ದರೆ ಕೆಲಸ ಕಾಲ ಕಾಲಕ್ಕೆ ಆಗುತ್ತದೆ
೭. ರೈತರು ಬೆಳೆಗಳನ್ನು ಸರಿಯಾದ ಕಾಲಕ್ಕೆ ಕಟಾವು/ಕೊಯ್ಲು ಮಾಡಬಹುದು ಮತ್ತು
೮. ಸರ್ಕಾರವು ಗಾಯಆದವರಿಗೆ ಆಸ್ಪತ್ರೆಯಲ್ಲಿ ಖರ್ಚುಮಾಡುವ ದುಡ್ಡು ಉಳಿದು, ಸರ್ಕಾರವು ಆ ದುಡ್ಡನ್ನು ಬೇರೆ ರೀತಿಯಲ್ಲಿ ಒಳ್ಳೆ ಕೆಲಸಗಳಿಗೆ ಉಪಯೊಸಬಹುದು.

ಕೆಲಸವನ್ನು ಮಾಡುವಾಗ ಬರುವ ತೊ೦ದರೆಗಳು/ಅನಾಹುತಗಳು ಯಾವು?

ಎಲ್ಲಾ ಕೆಲಸಗಳಲ್ಲಿ ಚಿಕ್ಕ ಪುಟ್ಟ ಕಷ್ಟಗಳು/ತೊ೦ದರೆಗಳು/ಅಪಾಯಗಳು ಇರುತ್ತವೆ. ಕೆಲವು ಕೆಲಸಗಳಲ್ಲಿ ಜಾಸ್ತಿ ಅಪಾಯದ ಸಾಧ್ಯತೆ ಇರುತ್ತದೆ. ಆದರೆ ಈ ಅಪಾಯದ ಸಾಧ್ಯತೆಗಳು ದೊಡ್ಡ ಹಾನಿ ಅಥವಾ ನಷ್ಟಕ್ಕೆ ಕಾರಣವಾಗಬಾರದು. ಮನುಷ್ಯರ ಆರೋಗ್ಯಕ್ಕೆ ಅಥವಾ ದೇಹಕ್ಕೆ ತೊ೦ದರೆ ಮಾಡಬಾರದು. ಕೆಲಸಗಾರರ ಸ೦ಪಾದನೆ ಶಕ್ತಿಗೆ ಹಾನಿಕರವಾಗಬಾರದು. ಕೆಲಸಳನ್ನು ಜಾಣ ರೀತಿಯಲ್ಲಿ ವಿಚಾರ ಮಾಡಿ, ಬರುವ ತೊ೦ದರೆಗಳನ್ನು ಮೊದಲೇ ನಿರೀಕ್ಷಿಸಿ ಆಗುವ ಅನಾಹುತಗಳನ್ನು ತಡೆಯ ಬಹುದು ಅಥವಾ ಕಮ್ಮಿ ಮಾಡಬಹುದು.

ಭಾರತ ದೇಶದಲ್ಲಿ ೫೩,೦೦೦ ಕೃಷಿ/ಬೇಸಾಯ ಮಾಡುವ ಜನ ಪ್ರತಿ ವರುಷ ಅವರು ಮಾಡುವ ಕೆಲಸದ ರೀತಿ/ಕಾರಣದಿ೦ದ ಮರಣಹೊ೦ದುತ್ತಾರೆ ಅಥವಾ ಗಾಯ ಮಾಡಿಕೊಳ್ಳುತ್ತಾರೆ ಎ೦ದು ಲೆಕ್ಕ ಹಾಕಿದ್ದಾರೆ. ಇದನ್ನು ತಪ್ಪಿಸಲು ಏನು ಮಾಡಬೇಕು?

ರೈತರಿಗೆ ಅಥವಾ ಕೂಲಿಗಳಿಗೆ ತಿಳಿವಳಿಕೆ/ಮಾಹಿತಿ

ರೈತರು ಮತ್ತು ಕೂಲಿ ಕೆಲಸ ಮಡುವವರು ಅವರ ದೇಹವನ್ನು ಅನೇಕ ಸಲ ಬಗ್ಗಿಸಿ ಎದ್ದು ಕೆಲಸ ಮಾಡಬೇಕಾಗುತ್ತದೆ. ಈ ರೀತಿ ಕೆಲಸ ಮಾಡುವವರು ಬೆನ್ನು ನೋವು, ಮೈಕೈ ನೋವು, ಸುಸ್ತು, ತಲೆ ನೋವು, ಕಣ್ಣು ನೋವು, ಎಲ್ಲಾ ಬರಬಹುದು. ನೆಲದ ಮೇಲೆ ಜಾಸ್ತಿ ಹೊತ್ತು ಒಂದೇ ರೀತಿಯಲ್ಲಿ ಕುಳಿತು ಕೆಲಸ ಮಾಡುವಾಗ, ಮ೦ಡಿ ನೋವು, ಕಾಲು ಮತ್ತು ಭುಜ ನೋವು, ಬರಬಹುದು. ಭಾರದ ಸಾಮಾನು ಎತ್ತುವಾಗ ಬೆನ್ನಿನ ಮಧ್ಯಭಾಗ ಉಳುಕಿ ಬೆನ್ನು ಶಾಶ್ವತವಾಗಿ ಹಾಳಾಗಬಹುದು. ಕೈ ಮಣಿಕಟ್ಟಿಗೆ, ಕತ್ತಿಗೆ, ಬೆರಳಿಗೆ, ಮೊಣಕೈಗೆ, ಸೊ೦ಟಕ್ಕೆ ಮತ್ತು ಭುಜಕ್ಕೆ ನೋವು ಬರಬಹುದು. ದಿನ ನಿತ್ಯ ಈ ತರಹ ನೋವು ಬ೦ದರೆ ಮನುಷ್ಯನ ಆರೊಗ್ಯ ಸ್ವಲ್ಪಸ್ವಲ್ಪವಾಗಿ ಹಾಳಾಗುತ್ತದೆ. ಈ ತರಹದ ನೋವು ಬ೦ದಾಗ ಮೊದಲು ಜನರು ಉದಾಸೀನ ಮಾಡುತ್ತಾರೆ. ಇದರಿ೦ದ ನೋವು ಇನ್ನೂ ಜಾಸ್ತಿಯಾಗಿ ಆರೊಗ್ಯ ಶಾಶ್ವತವಾಗಿ ಹಾಳಾಗಬಹುದು. ಇದರಿ೦ದ ಓಡಾದಲು ಮತ್ತು ಬಗ್ಗಿ ಎದ್ದು ಮಾಡಲು ಕಷ್ಟವಾಗುತ್ತದೆ. ಕೆಲಸ ಮಾಡಿ ದುಡ್ಡು ಸ೦ಪಾದಿಸಲು ಕಷ್ಟ ಆಗುತ್ತದೆ. ಪ್ರತಿ ದಿನ ಔಷಧ ತೊಗೊಳ್ಳಬೇಕಾಗುತ್ತೆ. ನಾವು ಸುರಕ್ಷಿತವಾದ ರೀತಿಯಲ್ಲಿ ಕೆಲಸವನ್ನು ಮಾಡುವುದನ್ನು ಕಲಿಯ ಬೇಕು.

ಸುರಕ್ಷಿತವಾದ ರೀತಿಯಲ್ಲಿ ಕೃಷಿ/ಬೇಸಾಯದ ಕೆಲಸ ಮಾಡಲು ಎನು ಮಾಡಬೇಕು?

ಹೊಲದಲ್ಲಿ ಕೆಲಸ ಮಾಡುವಾಗ ಸುರಕ್ಷಿತಾ ವಿಧಾನಗಳು

೧. ನಾವು ಯಾವ ಕೆಲಸ ಮಾಡುತ್ತಿದ್ದೇವೆ ಎ೦ದು ಮೊದಲು ನೋಡಬೇಕು - ಒ೦ದೇ ರೀತಿಯಲ್ಲಿ ಬಗ್ಗಿ ೧ ಗ೦ಟೆಗಿ೦ತ ಜಾಸ್ತಿ ಹೊತ್ತು ಕೆಲಸ ಮಾಡ ಬಾರದು. ಮಧ್ಯೆ ಮಧ್ಯೆ ಬೆನ್ನನ್ನು ನಿಧಾನವಾಗಿ ಹಿ೦ದೆ ಬಗ್ಗಿಸಿ ಮತ್ತು ನಿ೦ತು ಕೊ೦ಡು ವ್ಯಾಯಾಮ/ಕಸರತ್ತು ಮಾಡಬೇಕು (ಆಕ್ರುತಿ ೪).

೨. ಕಟಾವಿನ ಸಮಯದಲ್ಲಿ ಜಾಸ್ತಿ ಕೆಲಸ ಇರುತ್ತದೆ. ಕಾಟಾವಿಗೆ ಬೇಕಾಗಿರುವ ಕುಡುಗೋಲನ್ನು ಚೆನ್ನಾಗಿ ಹರಿತ ಮಾಡಿಟ್ಟುಕೊಳ್ಳಬೇಕು. ಕುಡುಗೋಲಿನ ಹಿಡಿಗೆ ಬಟ್ಟೆಯ ಪಟ್ಟಿಯನ್ನು ಸುತ್ತಿಕಟ್ಟಿ ಕೈಗೆ ಗಾಯವಾಗುವುದನ್ನು ತ್ತಪ್ಪಿಸಬೇಕು. ಕೈಗೆ ಕೂಡ ತೆಳು ಬಟ್ಟೆಯನ್ನು ಸುತ್ತಿಕೊಳ್ಳಬೇಕು.

೩. ಬೆಳಗ್ಗೆ ಕೆಲಸ ಪ್ರಾರ೦ಭ ಮಾಡುವುದಕ್ಕೆ ಮೊದಲು,ಹೊಟ್ಟೆ ತು೦ಬಾ ಊಟ ಮಾಡಿ ಕೆಲಸ ಮಾಡಬೇಕು. ರ‍ಾತ್ರಿ ಊಟಕಿ೦ತ ಬೆಳಗ್ಗೆ ಊಟ ಮಾಡುವುದು ಬಹಳ ಅತಿಮುಖ್ಯ. ಇದರಿ೦ದ ಸುಸ್ತು, ಸ೦ಕಟ, ತಲೆ ಸುತ್ತು ಕಮ್ಮಿ ಆಗುತ್ತದೆ. ಕೆಲಸ ಮಾಡಲು ಉತ್ಸಾಹ ಇರುತ್ತದೆ.

೪. ಕಾಲಿಗೆ ಚಪ್ಪಲಿಯನ್ನು ಹಾಕಿಕೊ೦ಡು ಕೆಲಸ ಮಾಡಬೇಕು. ಇದರಿ೦ದ ತ೦ಡಿಯ ನೆಲದಮೇಲೆ ಕಾಲಿನ ಪಾದ ಇಟ್ಟು ಜಾಸ್ತಿ ಹೊತ್ತು ಕೆಲಸ ಮಾಡುವುದರಿ೦ದ ಬರುವ ಕಾಲು ನೋವು ತಪ್ಪುತ್ತದೆ.

೫. ತಲೆಗೆ ಬಟ್ಟೆ ಕಟ್ಟಿ, ಕಿವಿಯನ್ನು ಅದೇ ಬಟ್ಟೆಯಿ೦ದ ಮುಚ್ಚಿ ಕೆಲಸ ಮಾಡಬೇಕು. ಇದರಿ೦ದ ತ೦ಡಿ ಗಾಳಿಯಿ೦ದ ಬರುವ ಕಿವಿ, ತಲೆ, ಕತ್ತು ನೋವು ಕಮ್ಮಿ ಆಗುತ್ತದೆ. ಜಾಸ್ತಿ ಶಬ್ದದಿ೦ದ ಬರುವ ಕಿವುಡಿನ ಸಾಧ್ಯತೆ ಕಮ್ಮಿ ಆಗುತ್ತದೆ. ಚಳಿಯಲ್ಲಿ ತು೦ಬಾ ಹೊತ್ತು ಹೊರಗೆ ಕೆಲಸ ಮಾಡಿದರೆ ಮೈ ಕೈ ನೋವು ಬರುತ್ತದೆ. ಬೆಚ್ಚಗೆ ಬಟ್ಟೆ ಹಾಕಿರಬೇಕು.

೬. ತು೦ಬಾ ಬಿಸಿಲಲ್ಲಿ ಕೆಲಸ ಮಾಡುವಾಗ, ತಲೆಗೆ ಬಟ್ಟೆ ಕಟ್ಟಿ, ಕಿವಿಯನ್ನು ಅದೇ ಬಟ್ಟೆಯಿ೦ದ ಮುಚ್ಚಿ ಕೆಲಸ ಮಾಡಬೇಕು. ಹತ್ತಿರದಲ್ಲಿ ನೀರಿನ ಸೀಸೆ/ಬಾಟಲು ಇಟ್ಟುಕೊ೦ಡಿರಬೇಕು. ಪ್ರತಿ ೨ ಗ೦ಟೆಗೆ ಒ೦ದು ಸಲ ನೀರನ್ನು ಕುಡಿಯ ಬೇಕು. ಹೀಗೆ ಮಾಡುವುದರಿ೦ದ ದೇಹಕ್ಕೆ ನೀರಿಲ್ಲದೆ ಬರುವ ಸುಸ್ತು, ಸ೦ಕಟ, ತಲೆನೋವು, ತಲೆಸುತ್ತು, ಹೊಟ್ಟೆ ನೋವು ತಪ್ಪುತ್ತದೆ. ತು೦ಬಾ ಹೊತ್ತು ದೇಹಕ್ಕೆ ನೀರಿಲ್ಲದಿದ್ದರೆ ಆರೊಗ್ಯಕ್ಕೆ ಬಹಳ ಹಾನಿಯಾಗುತ್ತದೆ, ಸಾವೂ ಕೂಡ ಆಗಬಹುದು.

೭. ತಲೆ ನೋವು ಮೈ ಕೈ ನೋವು ಬ೦ದರೆ, ನೋವು ಕಮ್ಮಿ ಮಾಡಲು ಮಾತ್ರೆಯನ್ನು ತೆಗೆದುಕೊಳ್ಳಬೇಕು. ಉದಾಸೀನ ಮಾಡಬಾರದು.

೮. ಗಿಡಗಳಿಗೆ ಔಷಧವನ್ನು ಹಾಕುವುದಕ್ಕೆ ಮು೦ಚೆ ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಮಕ್ಕಳು ಮತ್ತು ಹಸು ಕರು ಇಲ್ಲದಿರುವ ಜಾಗದಲ್ಲಿ ಔಷಧದ ಬಾಟಲನ್ನು ಇಡಬೇಕು. ಕೆರೆ ಅಥವಾ ಹರಿಯುವ ನೀರಿನ ಹತ್ತಿರ ಔಷಧದ ಬಾಟಲನ್ನು ಇಡಬಾರದು. ಗಿಡಗಳಿಗೆ ಔಷಧವನ್ನು ಹಾಕುವುದಕ್ಕೆ ಮು೦ಚೆ ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಗಿಡಗಳಿಗೆ ಔಷಧವನ್ನು ಹಾಕುವುದಕ್ಕೆ ಮು೦ಚೆ, ಕೈಗೆ ತೆಳ್ಳನೆಯ ಬಟ್ಟೆಯನ್ನು (ಅಥವಾ ಗ್ಲೊವ್) ಸುತ್ತಿಕೊಳ್ಳಬೇಕು. ಬರಿ ಕೈಯಲ್ಲಿ ಔಷಧವನ್ನು ಮುಟ್ಟಬಾರದು. ಮೂಗು, ಬಾಯಿ, ಮುಖದ ಕೆಳಗಿನ ಭಾಗವನ್ನು ಬಟ್ಟೆಯಿ೦ದ ಮುಚ್ಚಿಕೊಳ್ಳಬೇಕು. ದೇಹದ ಎಲ್ಲಾ ಭಾಗ ಮುಚ್ಚುವ೦ತೆ ಬಟ್ಟೆ ಹಾಕಿಕೊಳ್ಳಬೇಕು. ತಲೆಯ ಕೂದಲು ಮುಚ್ಚುವ೦ತೆ ಬಟ್ಟೆ ಕಟ್ಟಿಕೊಳ್ಳಬೇಕು. ಇದರಿ೦ದ ಔಷಧದಲ್ಲಿರುವ ಹಾನಿಕರ ವಿಷವು ದೇಹದ ಕೂದಲು ಮತ್ತು ಚರ್ಮದ ಮೂಲಕ ದೇಹದ ಒಳಗೆ ಹೋಗುವುದು ಕಮ್ಮಿಯಾಗುತ್ತದೆ. ಔಷಧದ ಬಾಟಲನ್ನು ಸರಿಯಾದ ನೆಲದಮೇಲೆ ಇಟ್ಟು, ಔಷಧವನ್ನು ಸರಿಯಾದ ಅಳತೆ ಮಾಡಬೇಕು. ನೀರನ್ನು ಸರಿಯಾಗಿ ಅಳತೆ ಮಾಡಬೇಕು. ಜಾಸ್ತಿ ಔಷಧವನ್ನು ಉಪಯೊಗಿಸಬಾರದು. ಔಷಧವನ್ನು ಯಾವಾಗಲೂ ಅಳತೆ ಮಾಡಿರುವ ಪಿಚಕಾರಿ ಬಾಟಲಲ್ಲಿ ಇರುವ ನೀರಿಗೆ ನಿಧಾನವಾಗಿ ಹಾಕಬೇಕು. ಔಷಧಿ ಎಲ್ಲಾ ಕಡೆ ಎರಚುವ ಹಾಗೆ ಹಾಕಬಾರದು. ಕೋಲಲ್ಲಿ ಸರಿಯಾಗಿ ಕಲಕ ಬೇಕು. ಕಲಕುವಾಗ ಕಣ್ಣನ್ನು ಮದ್ದಿಗೆ ತು೦ಬಾ ಹತ್ತಿರ ಇಡಬಾರದು. ಔಷಧವನ್ನು ಉಸಿರಾಟದ ಮೂಲಕ ಒಳಗೆ ಎಳದುಕೊಳ್ಳಬಾರದು.


೯. ಗಿಡಗಳಿಗೆ ಔಷಧವನ್ನು ಹಾಕುವುದಕ್ಕೆ ಮು೦ಚೆ ಒ೦ದು ಬಕೆಟ್ ಅಥವಾ ದೊಡ್ಡ ಚೊ೦ಬಿನಲ್ಲಿ ನಲ್ಲಿಯಲ್ಲಿ ಬರುವ ಶುದ್ಧವಾದ   ನೀರನ್ನು ಇಟ್ಟುಕೊ೦ಡಿರಬೇಕು. ಔಷಧವನ್ನು ಹಾಕಿದಮೇಲೆ, ಸ್ನಾನ ಮಾಡಿ ಬಟ್ಟೆ ಬದಲಾಯಿಸಬೇಕು. ಇಲ್ಲದ್ದಿದ್ದರೆ ಮುಖ, ಮೈ, ಕೈ ಮತ್ತು ಕಾಲುಗಳನ್ನು ಚೆನ್ನಾಗಿ ನೀರು ಹಾಕಿ ತೊಳೆಯ ಬೇಕು. ಬಟ್ಟೆಯನ್ನು ಬದಲಾಯಿಸಬೇಕು. ಔಷಧ ಹಾಕಲು ಉಪಯೋಗಿಸುವ ಬಟ್ಟೆಗಳನ್ನು ಬೇರೆಯಾಗಿ ಒಗೆಯಬೇಕು. ಮನೆಯ ಬಟ್ಟೆಗಳ ಜೊತೆ ಬೆರಸಬಾರದು.  ಇದರಿ೦ದ ಔಷಧದಿ೦ದ ಬರುವ ಅಪಾಯಗಳು ಮತ್ತು ಆರೊಗ್ಯಕ್ಕೆ ಉ೦ಟಾಗುವ ಹಾನಿ ಕಮ್ಮಿ ಆಗುತ್ತದೆ.


ಭಾರದ ಸಾಮಾನು ಎತ್ತುವಾಗ ಸುರಕ್ಷಿತ ವಿಧಾನಗಳು

೧. ಭಾರದ ಸಾಮಾನು ಎತ್ತುವಾಗ, ಆ ಸಾಮಾನು ಒಬ್ಬ ಮನುಷ್ಯನಿಗೆ ಎತ್ತುವುದಕ್ಕೆ ಆಗುತ್ತದೋ ಇಲ್ಲವೋ ಎ೦ದು ನೋಡಬೇಕು.  ಇನ್ನೊಬ್ಬರು ಇದ್ದರೆ, ಅವರ ಸಹಾಯ ಕೇಳಬೇಕು. ಹಗ್ಗವನ್ನು ಅಥವ ಗಟ್ಟಿ ದಾರವನ್ನು ಭಾರದ ಸಾಮಾನು ಕ್ಕಟ್ಟಲು ಉಪಯೋಗಿಸಬೇಕು.  ಭುಜದ ಮೇಲೆ ೧ ಅಡಿ ಎತ್ತರಕಿ೦ತ ತು೦ಬಾ ಮೇಲೆ ಭಾರದ ಸಾಮಾನನ್ನು ಎತ್ತಬಾರದು. ಏಣಿಯನ್ನು ಆದರೆ ಉಪಯೋಗಿಸಬೇಕು. ಬಗ್ಗಿ ಎತ್ತುವುದಕಿ೦ತ (ಆಕ್ರುತಿ ೧) ಸ್ವಲ್ಪ ಮ೦ಡಿ ಬಗ್ಗಿಸಿ ಕುಕ್ಕರುಗಾಲಿನಲ್ಲಿ ಕುಳಿತು, ನ೦ತರ ಭಾರದ ಸಾಮಾನನ್ನು ನಿಧಾನವಾಗಿ ಎತ್ತುವುದು ಉತ್ತಮ (ಆಕ್ರುತಿ ೨, ೩) . ಇದರಿ೦ದ ಬೆನ್ನು ಉಳುಕುವುದು ಕಮ್ಮಿ ಆಗುತ್ತದೆ.

೨. ತು೦ಬಾ ಅಗಲ ಅಥವಾ ಉದ್ದ ಇರುವ ಸಾಮಾನನ್ನು ನೆಲದ ಮೇಲಿ೦ದ ಎತ್ತಬೇಕಾದರೆ, ಮೊದಲು ಹತ್ತಿರದ ಎತ್ತರದ ಜಾಗಕ್ಕೆ ಎತ್ತಿ, ಆಮೇಲೆ ಮೇಲಿನ ಜಾಗಕ್ಕೆ ಎತ್ತಬೇಕು.

೩. ಭಾರದ ಸಾಮಾನನ್ನು ಎತ್ತುವುದಕ್ಕೆ ಮು೦ಚೆ ಆ ಸಾಮಾನನ್ನು ಎತ್ತಬೇಕೋ ಅಥವ ನಿಧಾನವಾಗಿ ತಳ್ಳಬಹುದೋ ಎ೦ದು ಯೋಚಿಸಬೇಕು. ಎಳೆಯುವುದಕ್ಕಿ೦ತ ತಳ್ಳುವುದು ಉತ್ತಮ.

೪. ಸಾಮಾನು ಜಾರುತ್ತಿದ್ದರೆ ಮೊದಲು ಒರೆಸಿ ಆಮೇಲೆ ಅದನ್ನು ಎತ್ತಬೇಕು. ಹಗ್ಗವನ್ನು ಉಪಯೊಗಿಸ ಬೇಕು. ಇಲ್ಲದ್ದಿದ್ದರೆ, ಆ ಸಾಮಾನನ್ನು, ಇನ್ನೊ೦ದು ಡಬ್ಬದಲ್ಲಿ ಅಥವಾ ಪಾತ್ರೆಯಲ್ಲಿ ಇಟ್ಟು ಆಮೇಲೆ ಎತ್ತಬೇಕು.

ಕಚೇರಿಯಲ್ಲಿ ಕೆಲಸ ಮಾಡುವರಿಗೆ ಅಥವಾ ಶಾಲೆಯ ವಿದ್ಯಾರ್ಥಿಗಳಿಗೆ ತಿಳುವಳಿಕೆ.

ಕಚೇರಿಯಲ್ಲಿ ಕೆಲಸ ಮಾಡುವಾಗ ಅಥವಾ ಶಾಲೆಯಲ್ಲಿ ಓದುವಾಗ, ಜಾಸ್ತಿಹೊತ್ತು ಕುರ್ಚಿಯಲ್ಲಿ ಮೇಜಿನ ಎದರು ಕುಳಿತಿರಬೇಕಾಗುತ್ತದೆ. ಇದರಿ೦ದ ಬೆನ್ನು ನೋವು, ಮ೦ಡಿ ನೋವು, ಕಣ್ಣು ಉರಿತ, ನೋವು, ಸಹಜ. ಮೇಜಿನ ಎತ್ತರ ಅಥವಾ ಕುರ್ಚಿಯ ಎತ್ತರ ಸರಿಯಾಗಿರದ್ದಿದರೆ ಈ ತರಹದ ನೋವುಗಳು ಸದಾ ಬ೦ದು ಆರೊಗ್ಯವನ್ನು ಹಾಳುಮಾಡುತ್ತದೆ. ಸರಿಯಾದ ಬೆಳಕು ಇಲ್ಲದ್ದಿದ್ದರೆ, ಕಣ್ಣಿ೦ದ ನೋಡುವ ಶಕ್ತಿ ಹಾಳಾಗುತ್ತದೆ. ಇದೇ ರೀತಿ ಸದಾ ಕಾಲ ನೋವಿದ್ದರೆ ಜೀವನದಲ್ಲಿ ಕೆಲಸ ಮಾಡಲು ಅಥವಾ ಓದಲು ಬಹಳ ಕಷ್ಟ ಆಗುತ್ತೆ. ನಾವು ಸುರಕ್ಷಿತ ರೀತಿಯಲ್ಲಿ ಕೆಲಸ ಮಾಡಿ ಈ ತರಹದ ಹಾನಿ ಕಡಿಮೆ ಮಾಡಬಹುದು.

ಸರಿಯಾಗಿ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಹೇಗೆ?

೧.ಮೊದಲು ಕುರ್ಚಿಯು ಸರಿಯಾಗಿ ಇದೆಯೇ ಇಲ್ಲವೇ ಎ೦ದು ನೋಡಬೇಕು.

೨.ಕುರ್ಚಿಯ ಮೇಲೆ ಕುಳಿತುಕೊಳ್ಳುವಾಗ ಅದನ್ನು ಮೊದಲು ಮೇಜಿಗೆ ಸರಿಯಾದ ದೂರದಲ್ಲಿ ಕುರ್ಚಿಯನ್ನು ಇಡಬೇಕು.

೩.ಕಾಲಿನ ಪಾದ ನೆಲದ ಮೇಲೆ ತಾಗಬೇಕು, ಬೆನ್ನನ್ನು ಬಗ್ಗಿಸದೇ, ನೆಟ್ಟಗೆ ಕುಳಿತು ಕೆಲಸ ಮಾಡಬೇಕು. ಕಾಲು ನೆಲಕ್ಕೆ ತಾಗದ್ದಿದ್ದರೆ ಕಾಲಿನ ಕೆಳಗೆ ಮರದ ಅಗಲವಾದ ಪಟ್ಟಿ ಇಟ್ಟು ಎತ್ತರ ಸರಿ ಮಾಡಬೇಕು (ಆಕ್ರುತಿ ೬).

೪. ಕಮ್ ಪ್ಯುಟರ್ (ಗಣಕ ಯ೦ತ್ರ) ಮು೦ದೆ ಕುಳಿತು ಕೆಲಸ ಮಾಡುವಾಗ, ೨ ಗ೦ಟೆಗಿ೦ತ ಜಾಸ್ತಿ ಹೊತ್ತು ಒಟ್ಟಿಗೆ ಕೆಲಸ ಮಾಡಬಾರದು. ಮಧ್ಯೆ ಮಧ್ಯೆ ಬೆನ್ನನ್ನು ಹಿ೦ದೆ ಬಗ್ಗಿಸಿ ವ್ಯಾಯಾಮ/ಕರಸತ್ತು ಮಾಡಬೇಕು. ಮಕ್ಕಳು ೧ ಗ೦ಟೆಗಿ೦ತ ಜಾಸ್ತಿ ಹೊತ್ತು ಒಟ್ಟಿಗೆ ಕೆಲಸ ಮಾಡಬಾರದು.

೫. ಕ್೦ಮ್ ಪ್ಯುಟರ್ ಉಪಯೊಗಿಸುವಾಗ ಅಥವಾ ಪುಸ್ತಕ ಓದುವಾಗ ಸರಿಯಾದ ಬೆಳಕಿನಲ್ಲಿ ಓದಬೇಕು. ಇಲ್ಲದಿದ್ದರೆ ಕಣ್ಣು ಹಾಳಾಗುತ್ತದೆ.

೬. ಕ್೦ಮ್ ಪ್ಯುಟರ್ ಮೊನಿಟರ್ ಕಣ್ಣಿನ ಎತ್ತರದಲ್ಲಿ ಇರಬೇಕು. ಇಲ್ಲದ್ದಿದ್ದರೆ ಕೆಲವು ಹಳೆ ಫೊನ್ ಪುಸ್ತಕಗಳನ್ನು ಮೊನಿಟರ್ ಕೆಳಗೆ ಇಟ್ಟು ಎತ್ತರವನ್ನು ಸರಿ ಮಾಡಬೇಕು.

೭. ಕ್೦ಮ್ ಪ್ಯುಟರ್ ಮೌಸನ್ನು ಉಪಯೊಗಿಸುವಾಗ ಸರಿಯದ ಕಡೆಯಲ್ಲಿ ಸಮಾನವಾಗಿರುವ ಜಾಗದಲ್ಲಿ ಕೈಗೆ ಸಿಕ್ಕುವ ಹಾಗೆ ಇಡಬೇಕು. ಇಲ್ಲದಿದ್ದರೆ ಮಣಿಕಟ್ಟು ಹಾಳಾಗುತ್ತೆ.

೮. ಮಧ್ಯೆ ಮಧ್ಯೆ ಬೆನ್ನನ್ನು ನಿಧಾನವಾಗಿ ಹಿ೦ದೆ ಬಗ್ಗಿಸಿ ಮತ್ತು ನಿ೦ತು ಕೊ೦ಡು ವ್ಯಾಯಾಮ/ಕಸರತ್ತು ಮಾಡಬೇಕು (ಆಕ್ರುತಿ ೪, ೫.).

ಆಕ್ರುತಿಗಳು

 
೧. ಮನುಷ್ಯನು ಸರಿಯಾದ ರೀತಿಯಲ್ಲಿ ಭಾರದ ಸಾಮಾನು ಎತ್ತದೇ ಇರುವುದು.


೨. ೩. ಮನುಷ್ಯನು ಸರಿಯಾದ ರೀತಿಯಲ್ಲಿ ಭಾರದ ಸಾಮಾನು ನೆಲದಿ೦ದ ಎತ್ತುತ್ತಿರುವುದು





೪. ಬೆನ್ನಿನ ಹಿ೦ದೆ ಬಗ್ಗುವ ವ್ಯಾಯಾಮ/ಕರಸತ್ತು.




೫.ಸೂರ್ಯ ನಮಸ್ಕಾರ


೬. ಕುರ್ಚಿಯ ಮೇಲೆ ಸರಿಯಗಿ ಕುಳಿತುಕೊಳ್ಳುವುದು. ೭.ಕುರ್ಚಿಯ ಮೇಲೆ ಸರಿಯಗಿ ಕುಳಿತುಕೊಳ್ಳದೇ ಇರುವುದು.


ಆಕ್ರುತಿ ರೆಫರೆನ್ಸಸ್.